ಗುರುವಾರ, ಮೇ 26, 2011

ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ವಿದ್ಯಾರ್ಥಿ ವೇತನಕ್ಕೆ ಕೊಂಕಣಿಗರಿಂದ ಅರ್ಜಿ ಆಹ್ವಾನ

ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
    ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಸ್ಥಾಪಿಸಲಾ ಗಿರುವ ``ವಿಶ್ವ ಕೊಂಕಣಿ ವಿದ್ಯಾರ್ಥಿ ನಿಧಿ''ಯು 2011ನೇ ಸಾಲಿನಲ್ಲಿ ಇಂಜಿನಿಯರಿಂಗ್ ಹಾಗೂ ಎಮ್.ಬಿ.ಬಿ.ಎಸ್. ಅಧ್ಯಯನ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ನೀಡಲು ಯಾವುದೇ ಜಾತಿ ಮತ್ತು ಧರ್ಮಕ್ಕೆ ಸೇರಿದ ಕೊಂಕಣಿ ಮಾತೃಭಾಷೆಯ ವಿದ್ಯಾರ್ಥಿಗಳಿಂದ (ಅಭ್ಯರ್ಥಿ) ಆನ್ ಲೈನ್ ವಿಧಾನದಿಂದ ಅರ್ಜಿ ಆಹ್ವಾನಿಸಿದ್ದು, 2011ರ ಜೂನ್ 5ರಿಂದ 20 ರ ಒಳಗೆ ವಿಶ್ವಕೊಂಕಣಿ ಡಾಟ್ ಓಆರ್ ಜಿ (http://www.vishwakonkani.org/) ಮೂಲಕ ಅರ್ಜಿ ಪಡೆದುಕೊಂಡು ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕೆಂದು ವಿಶ್ವ ಕೊಂಕಣಿ ಕೇಂದ್ರದ ಪತ್ರಿಕಾ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಳಿಗಾಗಿ ಈ (http://www.vishwakonkani.org/) ವೆಬ್ ಸೈಟ್ ಅನ್ನು ಸಂದರ್ಶಿಸಿರಿ

ಭಾನುವಾರ, ಮೇ 22, 2011

ಶಿರ್ಶಿಯ ಶ್ರೀ ವಾಸುದೇವ ಶ್ಯಾನುಭಾಗ ಇವರು ಲಿಪ್ಯಂತರ ಮಾಡಿದ
``ಕೊಂಕಣಿ ಚಲಚಿತ್ರಾಂ''
     ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲಾಭಿವೃದ್ಧಿಗೆ ಹಲವಾರು ವರ್ಷಗಳಿಂದ ವಿಶೇಷ ಸೇವೆ ಸಲ್ಲಿಸುತ್ತಾ ಬಂದಿರುವ ನಿವೃತ್ತ ಬ್ಯಾಂಕ್ ಉದ್ಯೋಗಿ ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆಗಿರುವ ಶಿರ್ಶಿಯ ಶ್ರೀ ವಾಸುದೇವ ಶಾನಭಾಗರವರು ಇಜಿದೋರ ದಾಂತಸ್ ರವರು ಬರೆದ ರೋಮನ್ ಲಿಪಿಯಲ್ಲಿದ್ದ ``ಕೊಂಕಣಿ ಚಲಚಿತ್ರಾಂ'' ಕೃತಿಯನ್ನು `ಕನ್ನಡ' ಲಿಪಿಗೆ ಲಿಪ್ಯಂತರಗೊಳಿಸಿ ಕೊಂಕಣಿ ಚಲನಚಿತ್ರ ರಂಗ ನಡೆದುಬಂದ ಹಾದಿಯನ್ನು ಕರ್ನಾಟಕದ ಓದುಗರಲ್ಲರೂ ಅರಿಯುವಂತೆ ಕೊಂಕಣಿಯಲ್ಲಿ ಈ ತನಕ ತಯಾರಾದ ಚಲನಚಿತ್ರಗಳ ಸಮಗ್ರ ಲೋಕವನ್ನು ನಮ್ಮೆದುರು ತೆರೆದಿಟ್ಟಿದ್ದಾರೆ. ಅವರ ಈ ಮಹಾ ಸಾಧನೆ ನಿಜಕ್ಕೂ ಅಭಿನಂದನಾರ್ಹ.
     ಕೊಂಕಣಿಯಲ್ಲಿ ಈ ತನಕ ತಯಾರಾದ ಒಟ್ಟು 33 ಚಲನಚಿತ್ರಗಳ ಕುರಿತು ಸ್ಥೂಲ ಮಾಹಿತಿ, ಅಗತ್ಯಕ್ಕೆ ತಕ್ಕ ಪೋಟೋಗಳು, ಆ ಚಲನಚಿತ್ರಗಳಲ್ಲಿ ಬಳಸಿದ ಪದ್ಯಗಳು, ಇತರ ಭಾಷಾ ಚಲನಚಿತ್ರ ಕ್ಷೇತ್ರದಲ್ಲಿ ಕೊಂಕಣಿ ಭಾಷಿಕರ ಯೋಗದಾನ ಇತ್ಯಾದಿ ಕೊಂಕಣಿ ಚಲನಚಿತ್ರಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಈ ಕೃತಿಯಲ್ಲಿ ಅಡಕವಾಗಿವೆ. ಈ ಆಕರ್ಷಕ ಕೃತಿಯನ್ನು ``ಕರ್ನಾಟಕ ಕೊಂಕಣಿ ಸಾಹಿತ್ಯ ಆಕಾಡೆಮಿಯವರು'' ಸುಂದರವಾಗಿ ಪ್ರಕಟಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮಂಗಳೂರುನಲ್ಲಿರುವ ಕೊಂಕಣಿ ಸಾಹಿತ್ಯ ಆಕಾಡೆಮಿಯನ್ನಾಗಲಿ ಅಥವಾ ಲೇಖಕ ಶ್ರೀ ವಾಸುದೇವ ಶಾನುಭಾಗರವರನ್ನು
(ಪೋನ್ : 9448756277 ) ಸಂಪರ್ಕಿಸಿರಿ.

ಶುಕ್ರವಾರ, ಮೇ 20, 2011

ಹುಬ್ಬಳ್ಳಿ ಶ್ರೀ ಕಾಶೀವೆಂಕಟರಮಣ ದೇವರ ಪ್ರಥಮ ವರ್ಧಂತಿ
ಹುಬ್ಬಳ್ಳಿ ಶ್ರೀ ಕಾಶೀವೆಂಕಟರಮಣ ದೇವರ ಪ್ರಥಮ ವರ್ಧಂತಿ ಉತ್ಸವವು ದಿನಾಂಕ: 05-04-2011ರಿಂದ 11-04-2011ರ ತನಕ ಶ್ರೀ ಕಾಶೀಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟಶಿಷ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ಮಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಅಪಾರ ಸಮಾಜ ಬಾಂಧವರ ಪಾಲ್ಗೊಳ್ಳುವಿಕೆಯ ಮೂಲಕ ವಿಜೃಂಭಣೆಯಿಂದ ಸಂಪನ್ನವಾಯಿತು. ಈ ಸಂದರ್ಭದಲ್ಲಿ ಪ|ಪೂ| ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ದೇವಸ್ಥಾನದಲ್ಲಿ  ಲಘುವಿಷ್ಣು ಹವನ, ಶ್ರೀ ಲಕ್ಷ್ಮೀನಾರಾಯಣ ಹೃದಯ ಹವನ, ಮುದ್ರಾಧಾರಣ, ಶ್ರೀ ವೆಂಕಟರಮಣ ದೇವರಿಗೆ ಶತಕಲಶಾಭಿಷೇಕ, ಪಂಚಾಮೃತಾಭಿಷೇಕ, ಎಳನೀರ ಅಭಿಷೇಕ, ಪವಮಾನ ಆದಿ ಅಭಿಷೇಕಗಳು ನಡೆದವು. ರಂಗಪೂಜ, ವಿಶೇಷ ಸರ್ವಾಲಂಕಾರಗಳು ಜನಮನ ಸೂರೆಗೊಂಡವು.
ಇದೇ ವೇಳೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜಿ.ಎಸ್.ಬಿ. ಸಮಾಜದ ಮಕ್ಕಳು ಪ್ರಸ್ತುತ ಪಡಿಸಿದ ನೃತ್ಯರೂಪಕ ``ಪುಣ್ಯಕೋಟಿ'', ಭರತನಾಟ್ಯ ಪ್ರದರ್ಶಿತಗೊಂಡವು. ಶ್ರೀ ರಘುನಂದನ ಭಟ್, ಶ್ರೀ ಶಂಕರ ಶ್ಯಾನುಭಾಗ, ಮಹಾಲಕ್ಷ್ಮೀ ಶೆಣೈ ಕಾರ್ಕಳ ಇವರಿಂದ ಭಕ್ತಿಸಂಗೀತ, ಶ್ರೀ ವೆಂಕಟರಮಣ ಭಜನಾ ಮಂಡಳಿ, ಹುಬ್ಬಳ್ಳಿ, ಶ್ರೀ ವೀರವೆಂಕಟೇಶ ಭಜನ ಮಂಡಳಿ ಮಂಗಳೂರು ಇವರಿಂದ ಭಜನಾ ಕಾರ್ಯಕ್ರಮಗಳು ನಡೆದವು.